ಜನಪದ ಚಿತ್ರಕಲೆ

ಮಾನವನ ಬರೆವಣಿಗೆಯಲ್ಲಿ ಮೊದಲು ಕಂಡು ಬಂದದ್ದು ಚಿತ್ರಗಳೇ. ಅವನು ವಾಸಿಸುತ್ತಿದ್ದ ಗುಹೆಗಳ ಹೊರ ಮತ್ತು ಒಳ ಮೈಗಳಲ್ಲಿ ಅಂಥ ಚಿತ್ರಗಳನ್ನು ಇಂದಿಗೂ ನೋಡಬಹುದು. ಮುಂದೆ ಆತ ಮಾತಿಗೆ ಬರೆವಣಿಗೆಯ ರೂಪ ಕೊಡಲು ಪ್ರಯತ್ನಿಸಿದಾಗಲೂ ಚಿತ್ರಗಳನ್ನೇ ಬಳಸಿದ. ಇದೇ ಮುಂದೆ ಚಿತ್ರಲಿಪಿಯಾಯಿತು. ಚೀನ, ಜಪಾನ್ ಮುಂತಾದ ದೇಶಗಳ ಲಿಪಿಗಳಲ್ಲಿ ಚಿತ್ರಲಿಪಿಯ ಸುಳುಹನ್ನು ಸ್ಪಷ್ಟವಾಗಿ ಗುರುತಿಸಬಹುದು. ಜನಪದ ಚಿತ್ರಕಲೆ ಜನಪದ ಸಂಗೀತದಷ್ಟೇ ಪ್ರಾಚೀನವಾದುದು. ಜನಪದ ಚಿತ್ರಕಲೆ ಆಯಾ ಜನದ ಜೀವನ 'ರೀತಿಗಳನ್ನು, ನಂಬಿಕೆಗಳನ್ನು, ಧಾರ್ಮಿಕ ವಿಚಾರಗಳನ್ನು ಪ್ರತಿನಿಧಿಸುತ್ತದೆ. ಜಿಂಕೆ, ಆನೆ, ಹುಲಿಗಳ ಬೇಟೆ ಹಾಗೂ ಕೃಷಿಗೆ ಸಂಬಂಧಿಸಿದ ಚಿತ್ರಗಳು ಹೇರಳವಾಗಿ ದೊರೆಯುತ್ತವೆ. ಜನ ತಾವು ಆಚರಿಸುವ ಹಬ್ಬಹುಣ್ಣಿಮೆಗಳಲ್ಲಿ ಹಾಕುವ ಬಗೆಬಗೆಯ ರಂಗವಲ್ಲಿಗಳಲ್ಲಿ, ಕಟ್ಟುವ ಮಂಟಪಗಳಲ್ಲಿ ಬಳಸುವ ಮಡಕೆ ಕುಡಿಕೆಗಳ ಮೇಲಿನ ಅಲಂಕರಣಗಳಲ್ಲಿ, ನೇಯುವ ಬಟ್ಟೆಗಳಲ್ಲಿ, ಧರಿಸುವ ಉಡಿಗೆ ತೊಡಿಗೆಗಳಲ್ಲಿ ಚಿತ್ರಕಲಾಭಿರುಚಿಯ ವಿವಿಧ ನಿದರ್ಶನಗಳನ್ನು ಕಾಣಬಹುದು. ಅನೇಕ ವಸ್ತುಸಂಗ್ರಹಾಲಯಗಳು ಜನಪದ ಚಿತ್ರಕಲೆಗೆ ಸಂಬಂಧಿಸಿದ ವಸ್ತುವಿಶೇಷಗಳನ್ನು ಸಂಗ್ರಹಿಸಿಟ್ಟಿವೆ. 										(ಪಿ.ಆರ್.ಟಿ.)

ಮಡಕೆಗಳು, ಆಟಿಕೆಗಳು, ಮತೀಯ ಪ್ರತಿಮೆಗಳು, ಮಾತೃದೇವತೆಯ ಶಿಲಾ ವಿಗ್ರಹಗಳು ಭಾರತದಲ್ಲಿ ಸಿಂಧೂಕಣಿವೆಯ ನಾಗರಿಕತೆಯ ನಿವೇಶನಗಳಲ್ಲಿ ಹೇರಳವಾಗಿ ದೊರೆತಿವೆ. ಇವು ಒಂದು ಜನಪ್ರಿಯ ಕಲಾ ರೂಪದ ಸಂಪ್ರದಾಯಕ್ಕೆ, ಅಂದರೆ ಜನಪದ ಕಲಾ ಸಂಪ್ರದಾಯಕ್ಕೆ ಸೇರಿದುವು. ಏಕೆಂದರೆ ಅದರ ಸಮಕಾಲೀನವೂ ಹೆಚ್ಚು ಕೃತಕವೂ ಆದ ಸಂಸ್ಕøತಿಗಳು ಉತ್ಪಾದಿಸಿದ ಕಲಾವಸ್ತುಗಳಿಗಿಂತ ಅವು ಬೇರೆಯಾಗಿವೆ. ಈ ಜನಪದ ಸಂಪ್ರದಾಯದ ಅವಿಚ್ಛಿನ್ನ ವಹನವಾದರೋ ಬಹಳ ಆಶ್ಚರ್ಯಕರವಾದ ಸತ್ತ್ವದಿಂದ ಕೂಡಿದೆ. ಏಕೆಂದರೆ ಭಾರತದ ಕೆಲವು ಭಾಗಗಳಲ್ಲಿ ಸಣ್ಣ ಮಣ್ಣಿನ ಬೊಂಬೆಗಳ ತಯಾರಿಕೆ ಕಂಡುಬರುತ್ತದೆ. ಇದು ಕಲ್ಪನೆ ಮತ್ತು ತಯಾರಿಕೆಗಳಲ್ಲಿ ಮಾತೃದೇವತೆ ಹಾಗೂ ಫರ್ಟಿಲಿಟಿ ಪಂಥಗಳನ್ನು ಪ್ರತಿನಿಧಿಸುವ ಚರಿತ್ರಪೂರ್ವ ವಿಗ್ರಹಗಳಿಗೆ ಸಮಾನವಾಗಿದೆ. ಮಕ್ಕಳ ಆಟದ ಸಾಮಾನುಗಳೂ ಕಂಡುಬರುತ್ತವೆ. ಅವಿಚ್ಛಿನ್ನ ಪರಂಪರೆಯ ಕೆಲವು ಅಲಂಕಾರಗಳು, ವಿನ್ಯಾಸಗಳು ಮತ್ತೆ ಮತ್ತೆ ಪುನರುಕ್ತವಾಗುತ್ತವೆ. ಹಾಗೆ ಅನೇಕ ಶತಮಾನಗಳಿಂದ, ವಿನ್ಯಾಸಗಳು ಮತ್ತೆ ಮತ್ತೆ ಪುನರುಕ್ತವಾಗುತ್ತವೆ. ಹಾಗೆ ಅನೇಕ ಶತಮಾನಗಳಿಂದ, ಯುಗಗಳಿಂದ ಪುನರುಕ್ತವಾಗುತ್ತಿದ್ದರೂ ಅವು ಪ್ರತಿಯೊಂದು ಸಾರಿಯೂ ಹೊಸದಾಗಿಯೇ ಕಾಣುತ್ತವೆ. ಇದು ಜನಪದ ಚಿತ್ರಕಲೆಯ ಮುಖ್ಯ ಲಕ್ಷಣಗಳಲ್ಲಿ ಒಂದು. ಹಳ್ಳಿಗರ ಕಲೆಯ ಒಂದು ಲಕ್ಷಣ ಅದರ ಸಂಪ್ರದಾಯ ಪಾಲನೆ. ಕಲೆಗಳಲ್ಲೆಲ್ಲ ಅದರ ಕಾಲವನ್ನು ಕುರಿತು ಖಚಿತವಾಗಿ ನಿರ್ದೇಶಿಸುವುದು ಇದಕ್ಕೆ ಮಾತ್ರ ಸಾಧ್ಯವಿಲ್ಲ. ಸರಳ ಸುಂದರ ಅಲಂಕಾರ ನಮೂನೆಗಳು ರೂಪುಗೊಂಡು ಶತಮಾನಗಳ ಕಾಲ ಉಳಿಯುತ್ತವೆ. ಹಳ್ಳಿಗರ ಮನಸ್ಸಿನಲ್ಲಿ ವಿನೂತನತೆಗಾಗಿ ಅವಿರತ ಹಂಬಲಿಕೆ ಇರುವುದಿಲ್ಲ. ಅವರು ಕೇಳುವುದು, ಒಂದು ವಸ್ತು ತನ್ನದೇ ಆದ ಬೆಡಗಿನಿಂದ ಕೂಡಿರಬೇಕು ಎಂದಷ್ಟೆ. ಕೆಲವೇ ಅಲಂಕಾರಗಳು ಮತ್ತು ಬಣ್ಣಗಳ ಮಿಶ್ರಣದಿಂದ ಅಸಂಖ್ಯಾತ ವೈವಿಧ್ಯ ಮತ್ತು ಪರಿಣಾಮಗಳನ್ನು ಪಡೆಯುವುದು ಸಾಧ್ಯ ಎಂಬುದನ್ನು ಅವರು ಅರಿತಂತೆ ತೋರುತ್ತದೆ.
ಅತ್ಯಂತ ಹೆಚ್ಚು ಕಾಲ ಉಳಿಯುವ ಲೋಹ ಅಥವಾ ಶಿಲೆಯಲ್ಲದೆ ಬೇರೆ ಯಾವುದೇ ವಸ್ತುವಿನಲ್ಲಿಯೂ ಕಲೆ ಕಾಲದ ದಾಳಿಗಳನ್ನು ಎದುರಿಸಿ ಉಳಿಯದಿರಬಹುದು. ಆದ್ದರಿಂದ ಚರಿತ್ರಪೂರ್ವ ಕಾಲದ ಅಥವಾ ಅನಂತರದ ಚಾರಿತ್ರಿಕ ಯುಗಗಳ ಜನಪದ ಚಿತ್ರಕಲೆಯ ನಿರೂಪಣೆಯನ್ನುಳ್ಳ ಒಂದು ಸುಸಂಬದ್ಧವಾದ ಕಾಲಾನುಕ್ರಮ ರೂಪರೇಷೆಯನ್ನು ಕೊಡುವುದು ಹೆಚ್ಚು ಕಡಿಮೆ ಅಸಾಧ್ಯವಾಗುತ್ತದೆ. ಮೌರ್ಯ ಪೂರ್ವಕಾಲದ ಆರ್ಷೇಯ ಮಣ್ಣಿನ ವಿಗ್ರಹಗಳು ಮತ್ತು ಸಂಗವಂಶದ ಕಾಲಕ್ಕೆ ಸೇರಿದವು ಜನಪದ ಪರಂಪರೆಯ ಮುಂದುವರಿಕೆಯನ್ನು ಸಮರ್ಥಿಸುತ್ತವೆ.

ಅದೆಷ್ಟೇ ಸ್ವಲ್ಪವಾಗಿರಲಿ, ಚಾರಿತ್ರಿಕ ಆಧಾರ ತೋರಿಸುವಂತೆ ಅಜಂತದ ಅಭಿಜಾತ ಚಿತ್ರಕಲಾಸೃಷ್ಟಿಯ ಅನಂತರ ಚಿತ್ರಕಲೆಯ ದೇಶೀಯ ಸಂಪ್ರದಾಯ ಹೆಚ್ಚಾಗಿ ಜನಪದ ಪರಂಪರೆಯ ಆರ್ಷೇಯ ಕುರುಹುಗಳನ್ನು ಹೊಂದಿದ್ದ ಕೃತಿಗಳಲ್ಲಿ ಉಳಿದು ಕೊಂಡು ಬಂತು ಎಂಬುದು ತೀರ ಸ್ಪಷ್ಟ. ನಿದರ್ಶನವೆಂದರೆ ಗುಜರಾತಿನ (ಪಶ್ಚಿಮ ಭಾರತೀಯ ಪದ್ಧತಿ) ಜೈನ ಕಲ್ಪಸೂತ್ರಗಳ ಪ್ರಾಚೀನ ತಾಳವೋಲೆಯ ಹಸ್ತಪ್ರತಿಗಳು, ಬಂಗಾಳದ ವಾಲ ಸಾಮ್ರಾಜ್ಯದ (ಪೂರ್ವ ಭಾರತೀಯ ಪದ್ಧತಿ) ಕೃತಿಗಳು. ಜನಪದ ಚಿತ್ರಕಲೆಯ (ಗುಜರಾತ್) ಒಂದು ಜನಪ್ರಿಯ ಶೈಲಿಯ ಕೆಲವು ಮೊದಲಿನ ಮಾದರಿಗಳು ಕ್ರಿ.ಶ. ಹನ್ನೊಂದನೆಯ ಶತಮಾನದವೆಂದು ಹೇಳಲಾಗಿದೆ. ಕ್ರಿ.ಶ. 14ನೆಯ ಶತಮಾನದಲ್ಲಿ ರಮಾನಂದ ಭಕ್ತಿಪಂಥವನ್ನು ಆರಂಭಗೊಳಿಸಿದ ಮೇಲೆ ಒಂದು ದೊಡ್ಡ ಪ್ರಚೋಧಕ ಶಕ್ತಿ ಮತ್ತು ಆವೇಶ ಭಾರತೀಯ ಜೀವನವನ್ನು, ಕಲೆ ಮತ್ತು ಸಾಹಿತ್ಯಗಳನ್ನು ಒಳಗೊಂಡಂತೆ, ಜಾಗೃತಗೊಳಿಸಿದುವು. ಪೌರಾಣಿಕ ಪುನರುಜ್ಜೀವನದ ಈ ಕಾಲದಲ್ಲಿ ಜನಪದ ಗೀತೆಗಳು ಮತ್ತು ಭಕ್ತಿಗೀತೆಗಳು ಉಚ್ಛ್ರಾಯಸ್ಥಿತಿಗೇರಿದುವು. ಗ್ರಾಮ ಚಿತ್ರಕಲಾವಿಧಾನದ ಮೇಲೆ ಭಕ್ತಿಪಂಥ ತನ್ನದೇ ಪ್ರಭಾವಗಳನ್ನು ಬೀರಿತು. ಭಾಗವತ ಮತ್ತು ಇತರ ಮೂಲಗಳಿಂದ ಶ್ರೀಕೃಷ್ಣನ ಜೀವನವನ್ನು ಚಿತ್ರಿಸುವ ಚಿತ್ರಗಳನ್ನು ಅಪಾರವಾದ ಸಂಖ್ಯೆಯಲ್ಲಿ ರಚಿಸಲಾಯಿತು. ವಿಶೇಷತಃ ಹಸ್ತಪ್ರತಿ ಚಿತ್ರಗಳ ರೂಪದಲ್ಲಿ ಮೊದಮೊದಲಿನ ರಾಜಸ್ಥಾನೀ ಚಿತ್ರಕಲೆ (ಕ್ರಿ.ಶ. 16ನೆಯ ಶತಮಾನ) ಜನಪದ ಕಲೆಯ ಹೆಚ್ಚು ಗುರುತುಗಳನ್ನು ತೋರಿಸುತ್ತದೆ. ಮೇವಾದ ಪದ್ಧತಿಯ (ಕ್ರಿ.ಶ. 17ನೆಯ ಶತಮಾನ) ಪ್ರಾರಂಭವಂತೂ ಇನ್ನು ಪ್ರಾಚೀನವಾದ ಆರ್ಷೇಯ ಅಥವಾ ಜನಪದ ಸಂಪ್ರದಾಯಗಳ ಬೇರುಗಳಿಗೆ ಹರಡಿಕೊಂಡಿತ್ತು. ತೀರ ಇತ್ತೀಚಿಗೆ ಕ್ರಿ.ಶ. 19ನೆಯ ಶತಮಾನದಲ್ಲಿ ಕಾಲಿಘಾಟ್ (ಬಂಗಾಳ) ಜನಪದ ಚಿತ್ರಕಲಾವಿದರು ಒಂದು ಓಜಸ್ಸಿನಿಂದ ಕೂಡಿದ ಸತ್ತ್ವಯುಕ್ತವಾದ, ಶೈಲಿಯನ್ನು ರೂಢಿಗೆ ತಂದರು.

ಮಾತೃದೇವತಾ ಪಂಥಗಳ ಜೇಡಿಮಣ್ಣಿನ ವಿಗ್ರಹಗಳು ಪ್ರಾಚೀನ ಜನಪದ ಸಂಸ್ಕøತಿಗಳಿಂದ ಮೂಡಿದುವು-ಎಂಬುದನ್ನು ಆಗಲೆ ನೋಡಿದ್ದೇವೆ. ಮುಂದೆ, ಜನಪದ ಚಿತ್ರಕಾರ ವೈಷ್ಣವ ಧರ್ಮದ ಪುನರುತ್ಥಾನವನ್ನು ಅನುಸರಿಸಿ, ದೊಡ್ಡ ಪ್ರಮಾಣದಲ್ಲಿ ದೇವತಾ ವಿಗ್ರಹಗಳನ್ನು ರಚಿಸಿದ. ನಾಥದ್ವಾರ (ಗುಜರಾತ್) ಮತ್ತು ಒರಿಸ್ಸಗಳಲ್ಲಿ ಕ್ರಮವಾಗಿ ನಾಥಜಿ ಮತ್ತು ಜಗನ್ನಾಥರ ವಿಗ್ರಹಗಳನ್ನು ತಯಾರಿಸಲಾಯಿತು. ಅಲ್ಲಿಗೆ ಬಂದ ಯಾತ್ರಿಕರು ತಮ್ಮ ಯಾತ್ರೆಯ ಗುರುತಾಗಿ ಅವನ್ನು ಒಯ್ಯುತ್ತಿದ್ದರು. ಈ ಪದ್ಧತಿ ಇಂದಿಗೂ ಉಳಿದುಬಂದಿದೆ.									(ಬಿ.ಎ.ಎನ್.)

ಕರ್ನಾಟಕದಲ್ಲಿ ಅಂದಂದಿನ ರಾಜಮನೆತನಗಳ ಪ್ರೋತ್ಸಾಹದಿಂದ ದೇಶೀಯ ಸಂಪ್ರದಾಯದ ಚಿತ್ರಕಲೆ ಬೆಳೆದುಬಂದಿದೆ. ಒಂದು ಸಾವಿರದ ನೂರರವತ್ತು ಪುಟಗಳ ಹೆಬ್ಬೊತ್ತಿಗೆಯಾದ ಶ್ರೀತತ್ತ್ವನಿಧಿಯಲ್ಲಿ ಅಪೂರ್ವವಾದ 1888 ವರ್ಣ ರಂಜಿತ ಚಿತ್ರಗಳೂ 458 ರೇಖಾಚಿತ್ರಗಳೂ ಇವೆ. ರಾಜರುಗಳ ವಂಶವೃಕ್ಷಗಳ ಭಿತ್ತಿಚಿತ್ರಗಳನ್ನು ಇದರಲ್ಲಿ ಕಾಣಬಹುದು. ಮುಮ್ಮಡಿಯವರು ಧ್ಯಾನಶ್ಲೋಕಗಳಿಗೆ ಅನುಸಾರವಾಗಿ ಬರೆಯಲಾದ ಸುಂದರವಾದ ಚಿತ್ರಗಳನ್ನೂ ಇದರಲ್ಲಿ ನೋಡಬಹುದು. ಶ್ರೀರಂಗಪಟ್ಟಣದಲ್ಲಿರುವ ಹೈದರನ ಕಾಲದ ಕುಡ್ಯ ಚಿತ್ರಗಳು ದೇಶೀಯ ಶೈಲಿಯಲ್ಲಿವೆ. ರಾಜರ ಪ್ರೋತ್ಸಾಹದಿಂದ ರೂಪುಗೊಂಡ ಕನ್ನಡ ರೀತಿಯ ಚಿತ್ರಗಳನ್ನು ಮನೆಮನೆಗಳಲ್ಲೂ ಮಠಮಂದಿರಗಳಲ್ಲೂ ಅರಮನೆ ಗುರು ಮನೆಗಳಲ್ಲೂ ನೋಡಬಹುದಾಗಿದೆ. ಕಾಗದದ ಮೇಲೆ ಬಟ್ಟೆಯ ಮೇಲೆ ಇಲ್ಲವೆ ಗಾಜಿನ ಮೇಲೆ ಜಲವರ್ಣ ಅಥವಾ ತೈಲವರ್ಣಗಳಲ್ಲಿ ರಾಜರುಗಳ ರೂಪ ಚಿತ್ರಗಳನ್ನು, ದೇವದೇವತೆಗಳ ಹಾಗೂ ಪೌರಾಣಿಕ ಸನ್ನಿವೇಶಗಳ ಸಂಯೋಜನ ಚಿತ್ರಗಳನ್ನು ವಿಶೇಷವಾಗಿ ರಚಿಸಲಾಗಿದೆ. ಸುವರ್ಣಲೇಪನದ, ವರ್ಣರಂಜಿತ ಕುಸೂರಿ ಕೆಲಸದ ಈ ಜನಪದ ಚಿತ್ರರಚನೆಯಲ್ಲಿ ಕಂಡುಬರುವ ಶ್ರದ್ಧೆ ತಾಳ್ಮೆ ಭಕ್ತಿ ಪ್ರತಿಭೆ ಸಾಧನೆ ಕಲ್ಪನೆ ಮುಂತಾದುವು ಮೆಚ್ಚುವಂಥವು. ಇಲ್ಲಿ ನಾವು ಕಾಣುವ ಇನ್ನೊಂದು ವಿಶೇಷವೆಂದರೆ ದೇಶೀಯ ಮೂಲವರ್ಣಗಳು. ಮೊದಲು ಸೀಸದ ಕಡ್ಡಿಯಲ್ಲಿ ಆಕೃತಿಯನ್ನು ರೂಪಿಸಿಕೊಂಡು ಅನಂತರ ವರ್ಣಗಳನ್ನು ಹಾಕಿ, ಅಲಂಕಾರ ವೈಖರಿಗಳನ್ನು ತರುವೆಡೆಗಳಲ್ಲೆಲ್ಲ ಬಿಳಿಯ ಸೀಸದಲ್ಲಿ ರೇಖೆಗಳನ್ನು ಎಳೆದು ಅದರ ಮೇಲೆ ವಜ್ರದ ಅಂಟನ್ನು ಸವರುತ್ತಾರೆ. ಅನಂತರ ಅದರ ಮೇಲೆ ಚಿನ್ನದ ರೇಖನ್ನು ಲೇಪಿಸುತ್ತಾರೆ. ರೇಖಿನ ಮೇಲೆ ವರ್ಣಗಳು ಜಾರದೆ ಭದ್ರವಾಗಿ ಕೂರುವಂತೆ ಒಂದು ಬಗೆಯ ಅಂಟನ್ನು ಬಳಸುತ್ತಾರೆ. ಬೂಟ ಕುಸುರಿನ ಕೆಲಸ ಮಾಡುವಾಗ ವಿವಿಧ ವರ್ಣಗಳನ್ನು ಬಳಸಿ ಆಯಾ ಭಾಗಗಳಿಗೆ ಸ್ವರ್ಣರೇಕಿನ ಲೇಪನ ಮಾಡುತ್ತಾರೆ. ಹೀಗೆ ರಚಿತವಾದ ಕೃತಿ ಅನೇಕ ವರ್ಷಗಳ ಕಾಲ ತನ್ನ ಪ್ರಕಾಶವನ್ನು ಕಳೆದುಕೊಳ್ಳದೆ ಚಿರನೂತನ ಎಂಬಂತೆ ಕಾಣುತ್ತಿರುತ್ತದೆ. ಹೆಚ್ಚಾಗಿ ಇವು ಪೂಜಾಚಿತ್ರಗಳಾದುದರಿಂದ ಅವುಗಳ ಮೇಲೆ ಚಿತ್ರಕಾರರ ಹೆಸರು ಕಂಡುಬರುವುದಿಲ್ಲ.
ಈಚೆಗೆ ಪಾಶ್ಚಾತ್ಯ ಸಂಪ್ರದಾಯಗಳ ಸಂಪರ್ಕದಿಂದ ನೂತನ ಪ್ರಯೋಗಗಳು ನಡೆಯುತ್ತಿವೆಯಾದರೂ ಜನಪದ ಶೈಲಿಯ ಪ್ರಗತಿ ಮಾತ್ರ ನಿಂತುಹೋದಂತೆ ಭಾಸವಾಗುತ್ತಿದೆ. ಆದರೆ ಕಲಂಕಾರಿ ಶೈಲಿಯ ಜನಪದ ಚಿತ್ರಕಲೆ ಮಾತ್ರ ಉಳಿಯಲು ಅನೇಕ ರೀತಿಯ ಸಹಕಾರ ದೊರೆಯುವಂತಾಗಿರುವುದು ಸಂತೋಷದ ವಿಷಯ.
ಕಲಂಕಾರಿ ಸಂಪ್ರದಾಯದ ಚಿತ್ರಕಲೆ ಜನಪದ ಚಿತ್ರಕಲೆಯಲ್ಲಿ ಪ್ರಮುಖವಾದುದು. ಆಂಧ್ರ ಪ್ರದೇಶದಲ್ಲಿ ಇದರ ಪ್ರಾಚೀನ ರೂಪಗಳನ್ನು ಕಾಣಬಹುದು. ಲೇಖಣಿಯ ಬಳಕೆ ಇದರ ವೈಶಿಷ್ಟ್ಯ. ಕಲಂ ಎಂದರೆ ಲೇಖಣಿ, ಕಾರಿ ಎಂದರೆ ಕೆಲಸ. ಇಂಥ ತಂತ್ರದಿಂದ ಮೂಡಿಬಂದ ವಿಶಿಷ್ಟ ಕಲಾಕೃತಿಗಳನ್ನು ಈಗ ದಕ್ಷಿಣ ಭಾರತದ ಅನೇಕ ಕಡೆಗಳಲ್ಲಿ ಕಾಣಬಹುದಾಗಿದೆ. ಆದರವು ಬಹುಮಟ್ಟಿಗೆ ಜೀರ್ಣವಾಗುತ್ತಿವೆ.

ಇಲ್ಲಿ ದೇಶೀಯ ವರ್ಣಗಳನ್ನೇ ಬಳಸಲಾಗುತ್ತದೆ. ರಾಮಾಯಣ, ಮಹಾಭಾರತ, ಭಾಗವತ ಮುಂತಾದ ಪೌರಾಣಿಕ ಹಾಗೂ ಚಾರಿತ್ರಿಕ ಸನ್ನಿವೇಶಗಳ ದೃಶ್ಯವನ್ನು ದೇಶೀಯ ಬಟ್ಟೆಯ ಮೇಲೆ ಬಿಡಿಸಲು ಬಣ್ಣಗಳನ್ನು ಬಳಸಿರುವುದನ್ನು ಗಮನಿಸಬೇಕು. ಅನೇಕ ದೇಗುಲಗಳಲ್ಲಿ ಈ ಬಗೆಯ ಚಿತ್ರಫಲಕಗಳನ್ನು ದೇವರುಗಳ ಹಿಂಬದಿಯಲ್ಲಿ ಇಲ್ಲವೆ ರಥಗಳ ಮಂಟಪಗಳಲ್ಲಿ ತೂಗುಹಾಕುವುದು ವಾಡಿಕೆಯಾಗಿತ್ತು.

ಕಲಂಕಾರಿ ಚಿತ್ರಕಲೆಯ ಮುಖ್ಯ ರಹಸ್ಯವಿರುವುದು ಚಿತ್ರಕ್ಕೆ ಬೇಕಾಗುವ ಬಟ್ಟೆ, ಬಣ್ಣ, ಲೇಖಣಿಗಳ ಸಿದ್ಧತೆಯಲ್ಲಿ. ಮೂಲಿಕೆಗಳಿಂದ ನೇರವಾಗಿ ಚೆಲುವೆಮಾಡಿದ ಹತ್ತಿ ಇಲ್ಲವೆ ರೇಷ್ಮೆ ಕೋರಾಬಟ್ಟೆಯ ಮೇಲೆ ಸಸ್ಯಗಳಿಂದ ತಯಾರಾದ ದೇಶೀಮೂಲವರ್ಣಗಳನ್ನು ಆತ ಜಾಣ್ಮೆಯಿಂದ ಬಳಸುತ್ತಾನೆ. ಚಿತ್ರ ಬರೆಯಲು ಉಪಯೋಗಿಸುವ ಬಟ್ಟೆಯನ್ನು ಮೈರಾಭಲಂ ಎಂಬ ದ್ರವ್ಯದಲ್ಲಿ ಮತ್ತೆ ಮತ್ತೆ ನೆನೆಹಾಕಿ ಹಿಂದಿ ಮರಳ ಮೇಲೆ, ಬಿಸಿಲಿನಲ್ಲಿ ಒಣಗಿಸಿ ತಯಾರಿಸುತ್ತಾರೆ. ಮೈರಾಭಲಂ ಎಂದರೆ ನೀರಿನಲ್ಲಿ ನೆನೆದ ಅಳಲೆಕಾಯಿ ಚೂರ್ಣವನ್ನು ಎಮ್ಮೆಯ ಹಾಲಿನೊಂದಿಗೆ ಬೆರಸಿ ಮಾಡಿದ ದ್ರವ.

ಕಲಾವಿದರು ಬಳಸುವ ವರ್ಣಗಳು ಕೇವಲ ಮೂರು ನಾಲ್ಕು. ಆಯಾ ಬಣ್ಣಗಳು ಬಟ್ಟೆಯ ಮೇಲೆ ಸ್ಥಿರವಾಗಿ ನಿಲ್ಲಲು ಸಹಾಯಕವಾಗುವಂತೆ ಪಟಿಕದ ರಸವನ್ನೂ ಉಪಯೋಗಿಸಲಾಗುತ್ತದೆ. ಉಪಯೋಗಿಸುವ ಜಲವರ್ಣಗಳೆಲ್ಲ ಗಿಡ ಮೂಲಿಕೆಗಳಿಂದ ಆದವು. ಕೆಂಪು, ಕಪ್ಪು, ಹಳದಿ ಮತ್ತು ನೀಲಿ-ಈ ನಾಲ್ಕು ಬಹುಮುಖ್ಯವಾದ ಮೂಲವರ್ಣಗಳು. ತಾಟಿಬೆಲ್ಲ, ಕಬ್ಬಿನಬೆಲ್ಲ ಮತ್ತು ಕಬ್ಬಿಣದ ಚೂರುಗಳ ಜೊತೆಯಲ್ಲಿ ನೀರು ಬೆರಸಿ ಮೂಲರೇಖೆಗಾಗಿ ಬಳಸುವ ಕಪ್ಪುಬಣ್ಣವನ್ನು ತಯಾರಿಸುತ್ತಾರೆ. ಮಂಜಿಷ್ಟ (ಬೇರು), ಸುರುಳು ಪಟ್ಟೆ (ಮರದ ತೊಗಟೆ), ತಾಮ್ರತೇಗ, ಏಟಿಜಲಗ ಮತ್ತು ನೀರು-ಇವುಗಳ ಸಮ್ಮಿಶ್ರಣದಿಂದ ರಕ್ತವರ್ಣವನ್ನು ಸಿದ್ಧಮಾಡುತ್ತಾರೆ. ಕರಕಹೂಗಳಿಂದ ವರ್ಣ ಮತ್ತು ದೇಶೀಯ ನೀಲಿಯನ್ನು ಪಡೆಯುತ್ತಾರೆ.

ಲೇಖನಿಗೆ ಇಲ್ಲಿ ಕುಂಚದ ಸ್ಥಾನ. ನೋಡಲು ಸಾಮಾನ್ಯವಾಗಿ ಕಂಡರೂ ಅದರ ಉಪಯೋಗ ಚಮತ್ಕಾರವಾದುದು. ಒಂದು ತುದಿ ಚೂಪಾಗಿರುವ ಆರು ಅಂಗುಲದ ಬಿದಿರಿನ ಕಡ್ಡಿಯನ್ನು ತಯಾರಿಸಿ ಅದರ ಚೂಪು ತುದಿಯ ಕೊಂಚ ಮೇಲುಭಾಗದಲ್ಲಿ ಸ್ವಲ್ಪ ಉಣ್ಣೆಯನ್ನು ಇಟ್ಟು ಅದರ ಸುತ್ತಲೂ ತೆಳು ನೂಲಿನಿಂದ ಬಿಗಿಯಲಾಗುತ್ತದೆ. ಆ ಭಾಗವನ್ನು ಬಣ್ಣಗಳಲ್ಲಿ ಅದ್ದಿ ತೆಗೆದು ಲೇಖಣಿಯಲ್ಲಿರುವ ಉಣ್ಣೆಯ ಭಾಗವನ್ನು ಬೆರಳುಗಳಿಂದ ಒತ್ತುತ್ತ ಹೋದರೆ ಅದರದಲ್ಲಿ ಸಂಗ್ರಹವಾದ ಬಣ್ಣ ಕಡ್ಡಿಯ ತುದಿಯ ಮೂಲಕ ಇಳಿದು ಬಟ್ಟೆಯ ಮೇಲೆ ಚಿತ್ರ ಮೂಡುತ್ತದೆ. ಬೇರೆ ಬೇರೆ ವರ್ಣಗಳಿಗೆ ಬೇರೆ ಬೇರೆ ಕಲಂಗಳನ್ನು ಉಪಯೋಗಿಸಲಾಗುತ್ತದೆ.

ಕಲಂಕಾರಿ ಕಲೆಯಲ್ಲಿ ನಾವು ಕಾಣುವ ಮುಖ್ಯ ಲಕ್ಷಣಗಳೆಂದರೆ ಪ್ರಾದೇಶಿಕ ಸಂಪ್ರದಾಯ, ನಿಷ್ಠೆ, ಮೌಲಿಕ ಪ್ರತಿಭೆ ಹಾಗೂ ಅಸಾಧಾರಣ ವೇಗ. ಈ ಕಲಾವಿದರ ಕಲ್ಪನಾಚಾತುರ್ಯ ನಿಜವಾಗಿ ದೊಡ್ಡದು. ಜಲವರ್ಣವಾದರೂ ಈ ಚಿತ್ರಗಳು ತೈಲವರ್ಣದ ಮೆರಗನ್ನು ತೋರುತ್ತವೆ.

	ಆಂಧ್ರದ ಗುಡ್ಡಗಾಡಿನ ಜನರಲ್ಲಿ ಈ ಕಲೆ ಮೊದಲು ಉಗಮವಾಯಿತು. ಚಿತ್ತೂರು ಜಿಲ್ಲೆಯ ಕಾಳಹಸ್ತಿಯಲ್ಲಿರುವ ವ್ರಾತಪತಿಯಲ್ಲಿ ಇಂದಿಗೂ ಕೆಲವು ಕಲಾವಿದರು ಇದ್ದಾರೆ. ಈ ಕಲೆಯ ಬೆಳವಣಿಗೆಗೆ ಕೇಂದ್ರ ಗೃಹ ಕೈಗಾರಿಕಾ ಸಂಸ್ಥೆ ಹೆಚ್ಚಿನ ಆಸಕ್ತಿಯನ್ನು ತೋರುತ್ತ ಬಂದಿದೆ. ಇವರಿಗಾಗಿ ತರಬೇತಿ ಕೇಂದ್ರ ಒಂದನ್ನು ಮದ್ರಾಸಿನಲ್ಲಿ ತೆರೆಯಲಾಗಿದೆ. ಅಲ್ಲಿ ಖ್ಯಾತ ಕಲಾವಿದರೂ ಕಲಾ ವಸ್ತುಗಳ ಸಂಗ್ರಾಹಕರೂ ಆದ ಕೋಡೂರು ರಾಮಮೂರ್ತಿಯವರ ಮುಂದಾಳುತನದಲ್ಲಿ ಒಳ್ಳೆಯ ಕೆಲಸ ನಡೆಯುತ್ತಿದೆ. ಹೊಸ ಹೊಸ ಪ್ರಯೋಗಗಳಿಗೂ ಅಲ್ಲಿ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಸಿದ್ಧವಾದ ಕೃತಿಗಳ ದೆಹಲಿ, ಮುಂಬಯಿ, ಮದ್ರಾಸು, ಹೈದರಾಬಾದು, ಬೆಂಗಳೂರು ಮುಂತಾದ ಕಡೆ ಅನೇಕ ಸಾರಿ ಪ್ರದರ್ಶನ ಕಂಡಿವೆ. 			(ಪಿ.ಆರ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ